ಹೊಸ ಆರ್ಥಿಕ ಶಾಕ್! ರೂಪಾಯಿ ಕುಸಿತ, ಹಣದುಬ್ಬರ ಏರಿಕೆ – ಮನೆಯ ಬಜೆಟ್ ಮೇಲೆ ಏನು ಪರಿಣಾಮ?
ಇತ್ತೀಚಿನ ದಿನಗಳಲ್ಲಿ ಜಾಗತಿಕ ಆರ್ಥಿಕ ಪರಿಸ್ಥಿತಿ ಮತ್ತೆ ಅನಿಶ್ಚಿತತೆಯತ್ತ ಸಾಗುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ವಿಶೇಷವಾಗಿ ಮಧ್ಯಪ್ರಾಚ್ಯ ಪ್ರದೇಶದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಯುದ್ಧದ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯನ್ನು ಕಾಣುತ್ತಿದೆ. ಈ ಬೆಳವಣಿಗೆಯ ಪರಿಣಾಮವಾಗಿ ಭಾರತ ಸೇರಿದಂತೆ ಅನೇಕ ದೇಶಗಳ ಆರ್ಥಿಕತೆಯ ಮೇಲೆ ಒತ್ತಡ ಹೆಚ್ಚಾಗುತ್ತಿದೆ.
ಇದರ ನಡುವೆ ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು ಮತ್ತಷ್ಟು ದುರ್ಬಲಗೊಂಡಿದ್ದು, ಇದೇ ಸಮಯದಲ್ಲಿ ದೇಶದ ಹಣ ದುಬ್ಬರವು ಸಹ 10 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಾಮಾನ್ಯ ಜನರ ಮನೆ ಬಜೆಟ್ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
ಹಾಗಾದರೆ ರೂಪಾಯಿ ಮೌಲ್ಯ ಕುಸಿಯಲು ಪ್ರಮುಖ ಕಾರಣವೇನು? ಹಣದುಬ್ಬರ ಏರಿಕೆಗೆ ಇದಕ್ಕೆ ಏನು ಸಂಬಂಧ? ಮತ್ತು ಈ ಟ್ರೆಂಡ್ ಮುಂದುವರೆದರೆ ಸಾಮಾನ್ಯ ಜನರ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀಳಬಹುದು? ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವೇನು ?
ಇತ್ತೀಚಿನ ಆರ್ಥಿಕ ವರದಿಗಳ ಪ್ರಕಾರ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸುಮಾರು ₹92.28 ಮಟ್ಟಕ್ಕೆ ಕುಸಿದಿದ್ದು, ₹93 ಗಡಿ ತಲುಪುವ ಸಾಧ್ಯತೆಗಳಿವೆ ಎಂಬ ಅಂದಾಜು ವ್ಯಕ್ತವಾಗಿದೆ. ಇದು ಕಳೆದ ಕೆಲವು ತಿಂಗಳಲ್ಲಿನ ಪ್ರಮುಖ ಕುಸಿತಗಳಲ್ಲಿ ಒಂದಾಗಿದೆ.
ರೂಪಾಯಿ ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣವೆಂದರೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಉಂಟಾಗಿರುವ ಯುದ್ಧ ಮತ್ತು ರಾಜಕೀಯ ಉದ್ವಿಗ್ನತೆಗಳಿಂದಾಗಿ ತೈಲ ಪೂರೈಕೆ ಬಗ್ಗೆ ಅನಿಶ್ಚಿತತೆ ಉಂಟಾಗಿದೆ. ಇದರಿಂದಾಗಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ಗೆ $100 ಗಡಿ ದಾಟಿದೆ. ಇದರಿಂದ ಬೆಲೆಯು ಹೆಚ್ಚಾಗುತ್ತಿದೆ.
ಭಾರತವು ತನ್ನ ತೈಲದ ಅಗತ್ಯದ ಬಹುಪಾಲು ವಿದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ ತೈಲ ಬೆಲೆ ಏರಿಕೆ ದೇಶದ ಆರ್ಥಿಕತೆಗೆ ನೇರ ಪರಿಣಾಮ ಬೀರುತ್ತದೆ. ತೈಲವನ್ನು ಡಾಲರ್ ಮೂಲಕ ಖರೀದಿ ಮಾಡಬೇಕಾಗುವುದರಿಂದ ಡಾಲರ್ ಮೇಲಿನ ಬೇಡಿಕೆ ಹೆಚ್ಚುತ್ತದೆ ಮತ್ತು ರೂಪಾಯಿ ಮೌಲ್ಯ ದುರ್ಬಲಗೊಳ್ಳುತ್ತದೆ.
10 ತಿಂಗಳಲ್ಲಿ ಗರಿಷ್ಠ ಮಟ್ಟ ತಲುಪಿದ ಹಣದುಬ್ಬರ
ಇದರ ಜೊತೆಗೆ ದೇಶದಲ್ಲಿ ಹಣದುಬ್ಬರದಲ್ಲಿಯೂ ಏರಿಕೆ ಕಂಡುಬಂದಿದೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರದ ಮೇಲೆ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರವು ಫೆಬ್ರವರಿ ತಿಂಗಳಲ್ಲಿ ಶೇ. 3.21ಕ್ಕೆ ಏರಿಕೆಯಾಗಿದೆ.
ಜನವರಿಯಲ್ಲಿ ಇದು ಶೇ. 2.74 ರಷ್ಟಿದ್ದರೆ, ಫೆಬ್ರವರಿಯಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ. ಇದರಿಂದಾಗಿ ಇದು ಸುಮಾರು 10 ತಿಂಗಳ ಗರಿಷ್ಠ ಮಟ್ಟವೆಂದು ಪರಿಗಣಿಸಲಾಗುತ್ತಿದೆ.
ಆಹಾರ ಹಣದುಬ್ಬರದಲ್ಲಿಯೂ ಏರಿಕೆ ಕಂಡುಬಂದಿದ್ದು, ಜನವರಿಯಲ್ಲಿ ಶೇ. 2.13 ಇದ್ದದ್ದು ಫೆಬ್ರವರಿಯಲ್ಲಿ ಶೇ. 3.47ಕ್ಕೆ ಏರಿಕೆಯಾಗಿದೆ. ತರಕಾರಿಗಳು, ಹಣ್ಣುಗಳು ಹಾಗೂ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯು ಇದರ ಪ್ರಮುಖ ಕಾರಣವಾಗಿದೆ.
ಟೊಮೆಟೊ, ಹೂಕೋಸು ಮತ್ತು ಕೊಬ್ಬರಿ ಸೇರಿದಂತೆ ಕೆಲವು ತರಕಾರಿಗಳ ಬೆಲೆಗಳು ಹೆಚ್ಚಾಗಿರುವುದರಿಂದ ಗ್ರಾಹಕರ ಖರ್ಚು ಹೆಚ್ಚಾಗುತ್ತಿದೆ. ಇದರ ಜೊತೆಗೆ ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಕೆಲವು ಆಭರಣಗಳ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾದ ಹಣದುಬ್ಬರ
ಹಣದುಬ್ಬರದ ಅಂಕಿ-ಅಂಶಗಳನ್ನು ನೋಡಿದರೆ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಏರಿಕೆ ಕಂಡುಬಂದಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹಣದುಬ್ಬರ ಶೇ. 3.37ಕ್ಕೆ ಏರಿಕೆಯಾದರೆ, ನಗರ ಪ್ರದೇಶಗಳಲ್ಲಿ ಇದು ಶೇ. 3.02 ರಷ್ಟಿದೆ. ಇದು ಗ್ರಾಮೀಣ ಜನರ ಜೀವನ ವೆಚ್ಚದಲ್ಲಿ ಹೆಚ್ಚು ಏರಿಕೆ ಕಂಡುಬರುತ್ತಿರುವುದನ್ನು ಸೂಚಿಸುತ್ತದೆ.
ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ನಿಗದಿಪಡಿಸಿರುವ ಶೇ. 2ರಿಂದ 6ರ ನಡುವಿನ ಗುರಿಯೊಳಗೆ ಹಣದುಬ್ಬರ ಇನ್ನೂ ಇರುವುದರಿಂದ ತಕ್ಷಣದ ಆತಂಕದ ಪರಿಸ್ಥಿತಿ ಇಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮನೆ ಬಜೆಟ್ ಮೇಲೆ ಬೀಳಬಹುದಾದ ಪರಿಣಾಮಗಳ ಬಗ್ಗೆ ತಿಳಿಯೋಣ ಬನ್ನಿ,
ಇಂದಿನ ಪರಿಸ್ಥಿತಿಯಲ್ಲಿ ತಕ್ಷಣವೇ ದೊಡ್ಡ ಪರಿಣಾಮ ಕಂಡುಬರುವ ಸಾಧ್ಯತೆ ಕಡಿಮೆ ಇದ್ದರೂ, ಈ ಟ್ರೆಂಡ್ ಮುಂದುವರೆದರೆ ಮುಂದಿನ ತಿಂಗಳುಗಳಲ್ಲಿ ಸಾಮಾನ್ಯ ಜನರ ಮನೆ ಬಜೆಟ್ ಮೇಲೆ ಸ್ಪಷ್ಟ ಪರಿಣಾಮ ಕಾಣಿಸಬಹುದು.
1. ಇಂಧನ ಮತ್ತು ಸಾರಿಗೆ ವೆಚ್ಚ ಹೆಚ್ಚಾಗಬಹುದು
ಕಚ್ಚಾ ತೈಲದ ಬೆಲೆಗಳು ಹೆಚ್ಚಾದರೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳ ಮೇಲೂ ಪರಿಣಾಮ ಬೀಳುತ್ತದೆ. ಇಂಧನ ಬೆಲೆ ಏರಿದರೆ ಸಾರಿಗೆ ವೆಚ್ಚಗಳು ಹೆಚ್ಚಾಗುತ್ತವೆ.
ಸಾರಿಗೆ ವೆಚ್ಚ ಹೆಚ್ಚಾದರೆ ಎಲ್ಲಾ ವಸ್ತುಗಳ ಸಾಗಣೆ ದುಬಾರಿಯಾಗುತ್ತದೆ. ಇದರಿಂದಾಗಿ ದೈನಂದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚುವ ಸಾಧ್ಯತೆ ಇದೆ.
2. ಆಹಾರ ವಸ್ತುಗಳ ಬೆಲೆ ಏರಿಕೆಯ ಮೇಲೆ ಪರಿಣಾಮ
ಇಂಧನ ವೆಚ್ಚ ಹೆಚ್ಚಾದರೆ ಕೃಷಿ ಮತ್ತು ಆಹಾರ ಉತ್ಪಾದನೆ ಮೇಲೂ ಪರಿಣಾಮ ಬೀಳುತ್ತದೆ. ರಸಗೊಬ್ಬರ, ಸಾಗಣೆ ಮತ್ತು ಸಂಗ್ರಹಣೆ ವೆಚ್ಚಗಳು ಹೆಚ್ಚಾಗುತ್ತವೆ.
ಇದರಿಂದಾಗಿ ತರಕಾರಿಗಳು, ಧಾನ್ಯಗಳು ಹಾಗೂ ಪ್ಯಾಕ್ ಮಾಡಿದ ಆಹಾರ ವಸ್ತುಗಳ ಬೆಲೆಗಳು ಹೆಚ್ಚಾಗಬಹುದು.
3. ಆಮದು ವಸ್ತುಗಳು ದುಬಾರಿಯಾಗುತ್ತದೆ.
ರೂಪಾಯಿ ದುರ್ಬಲವಾದರೆ ವಿದೇಶಗಳಿಂದ ಆಮದು ಮಾಡುವ ವಸ್ತುಗಳು ದುಬಾರಿಯಾಗುತ್ತವೆ. ಭಾರತ ಖಾದ್ಯ ತೈಲ, ರಸಗೊಬ್ಬರ, ಎಲೆಕ್ಟ್ರಾನಿಕ್ಸ್ ಹಾಗೂ ಕೈಗಾರಿಕಾ ಉಪಕರಣಗಳಂತಹ ಅನೇಕ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ.
ರೂಪಾಯಿ ಮೌಲ್ಯ ಕುಸಿದರೆ ಈ ಎಲ್ಲಾ ವಸ್ತುಗಳನ್ನು ಖರೀದಿಸಲು ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
4. ವಿದೇಶ ಪ್ರಯಾಣ ಮತ್ತು ಶಿಕ್ಷಣ ವೆಚ್ಚ ಹೆಚ್ಚಾಗಬಹುದು !
ರೂಪಾಯಿ ದುರ್ಬಲಗೊಳ್ಳುವುದರಿಂದ ವಿದೇಶ ಪ್ರಯಾಣದ ವೆಚ್ಚಗಳು ಹೆಚ್ಚಾಗುತ್ತವೆ. ವಿಮಾನ ಟಿಕೆಟ್ಗಳು ಮತ್ತು ವಿದೇಶಿ ಹೋಟೆಲ್ ವೆಚ್ಚಗಳು ಹೆಚ್ಚು ಆಗಬಹುದು.
ಇದೇ ವೇಳೆ ವಿದೇಶಗಳಲ್ಲಿ ಓದಲು ಹೋಗುವ ವಿದ್ಯಾರ್ಥಿಗಳಿಗೆ ಶಿಕ್ಷಣ ಶುಲ್ಕ ಹಾಗೂ ಜೀವನ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ.
5. EMI ಮತ್ತು ಬಡ್ಡಿದರಗಳ ಮೇಲೆ ಬೀರುವ ಪರಿಣಾಮವೇನು ?
ಹಣದುಬ್ಬರ ನಿರಂತರವಾಗಿ ಹೆಚ್ಚಾದರೆ ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಕಡಿತಗೊಳಿಸುವ ಅಥವಾ ಹೆಚ್ಚಿಸುವ ಬಗ್ಗೆ ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಇದರ ಪರಿಣಾಮವಾಗಿ ಗೃಹ ಸಾಲ, ವಾಹನ ಸಾಲ ಸೇರಿದಂತೆ ವಿವಿಧ EMI ಗಳ ಮೇಲೂ ಪರಿಣಾಮ ಬೀಳಬಹುದು.
ಹಣದುಬ್ಬರ ಮತ್ತು ರೂಪಾಯಿ ಮೌಲ್ಯದ ನಡುವಿನ ಸಂಬಂಧ ಏನು ?
ಆರ್ಥಿಕ ತಜ್ಞರ ಪ್ರಕಾರ ಹಣದುಬ್ಬರ ಮತ್ತು ಕರೆನ್ಸಿ ಮೌಲ್ಯಗಳ ನಡುವೆ ನಿಕಟ ಸಂಬಂಧವಿದೆ. ಒಂದು ದೇಶದಲ್ಲಿ ಬೆಲೆಗಳು ಮತ್ತೊಂದು ದೇಶಕ್ಕಿಂತ ವೇಗವಾಗಿ ಏರಿದರೆ ಆ ದೇಶದ ಕರೆನ್ಸಿ ಮೌಲ್ಯ ಕ್ರಮೇಣ ದುರ್ಬಲಗೊಳ್ಳುತ್ತದೆ.
ಇದನ್ನು ಖರೀದಿ ಶಕ್ತಿ ಸಮಾನತೆ ಎಂಬ ಆರ್ಥಿಕ ತತ್ವದ ಮೂಲಕ ವಿವರಿಸಲಾಗುತ್ತದೆ. ಹೆಚ್ಚಿನ ಹಣದುಬ್ಬರ ಇರುವ ದೇಶದಲ್ಲಿ ಕರೆನ್ಸಿಯ ಖರೀದಿ ಶಕ್ತಿ ಕಡಿಮೆಯಾಗುತ್ತದೆ.
ಆದರೆ ಅಲ್ಪಾವಧಿಯಲ್ಲಿ ತೈಲ ಬೆಲೆಗಳು, ಜಾಗತಿಕ ಹೂಡಿಕೆದಾರರ ನಡೆ, ಬಡ್ಡಿದರ ನಿರೀಕ್ಷೆಗಳು ಹಾಗೂ ಜಾಗತಿಕ ರಾಜಕೀಯ ಪರಿಸ್ಥಿತಿಗಳು ಕರೆನ್ಸಿ ಮೌಲ್ಯದಲ್ಲಿ ಏರಿಳಿತಕ್ಕೆ ಕಾರಣವಾಗುತ್ತವೆ.
ಮುಂದಿನ ದಿನಗಳಲ್ಲಿ ಏನಾಗಬಹುದು? ಬನ್ನಿ ನೋಡೋಣ , , ,
ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಹಣದುಬ್ಬರ ಇನ್ನೂ ನಿಯಂತ್ರಣದಲ್ಲಿದೆ ಎಂದು ಹೇಳಬಹುದು. ಆದರೆ ಜಾಗತಿಕ ಮಾರುಕಟ್ಟೆಯ ಅನಿಶ್ಚಿತತೆ ಮುಂದುವರೆದರೆ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ.
ವಿಶೇಷವಾಗಿ ತೈಲ ಬೆಲೆಗಳು ದೀರ್ಘಾವಧಿ ಏರಿಕೆಯಲ್ಲಿ ಮುಂದುವರೆದರೆ ಭಾರತ ಸೇರಿದಂತೆ ಅನೇಕ ದೇಶಗಳ ಆರ್ಥಿಕತೆ ಮೇಲೆ ಒತ್ತಡ ಹೆಚ್ಚಾಗಬಹುದು.
ಆದರೂ ತಕ್ಷಣವೇ ದೊಡ್ಡ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಜಾಗತಿಕ ಇಂಧನ ಮಾರುಕಟ್ಟೆಗಳು ಹೇಗೆ ಬೆಳವಣಿಗೆ ಕಾಣುತ್ತವೆ ಎಂಬುದರ ಮೇಲೆ ಮುಂದಿನ ಪರಿಸ್ಥಿತಿ ಅವಲಂಬಿತವಾಗಿರುತ್ತದೆ.
ಇಂತಹ ಮಹತ್ವದ ಅಪ್ಡೇಟ್ಗಳನ್ನು ಮಿಸ್ ಮಾಡಿಕೊಳ್ಳಬೇಡಿ! ಈ ಕೂಡಲೇ Jobfykannada.in ಪೇಜ್ ಫಾಲೋ ಮಾಡಿ ಮತ್ತು ನಮ್ಮ WhatsApp group ಗೆ join ಆಗಿ ಪ್ರತಿ ದಿನ ಹೊಸ ಸುದ್ದಿಗಳನ್ನು ಪಡೆಯಿರಿ.